ಇದೆ ೧೯ ರಂದು ಕೊಟ್ಟೂರು ಜಾತ್ರೆ.ನಾನು ಚಿಕ್ಕವನಿದ್ದಾಗಿನಿಂದಲೂ ಈ ಜಾತ್ರೆ ಬಗ್ಗೆ ವಿಶಿಷ್ಟ ಕುತೂಹಲ ಮತ್ತು ಬೆರಗು ನನ್ನ ಕಾಡುತ್ತಲೇ ಇದೆ.ನನಗಿನ್ನೂ ಚೆನ್ನಾಗಿ ನೆನಪಿದೆ.ಜಾತ್ರೆ ಬಂತೆಂದರೆ ನಮ್ಮ ಮನೆಗೆ ಬರುತ್ತಿದ್ದ ನೆಂಟರು,ಯಾವುದೊ ಊರಿನ ಪರಿಚಯಸ್ತರು,ಸ್ನೇಹಿತರು,ಹೀಗೆ ಎಲ್ಲರು ಸೇರಿ ಚಿಕ್ಕ ಮನೆಯಲ್ಲೊಂದು ಸಂತೆಯೇ ಏರ್ಪಡುತ್ತಿತ್ತು.ರಥೋತ್ಸವ ದಿನ ಮನೆಯ ಮುಂದಿನ ರಸ್ತೆ ಸಾವಿರಾರು ಜನರ ಓಡಾಟದಿಂದಾಗಿ ವಿಶಿಷ್ಟವಾಗಿ ಕಂಗೊಳಿಸುತ್ತಿತ್ತು.ಜಾತ್ರೆಗೆ ಬನ್ನಿ ಅಂಥ ಅಹ್ವಾನ ನೀಡದಿದ್ದರೂ ಆ ದಿನ ಸರಿಯಾಗಿ ಲಕ್ಷಾಂತರ ಜನ ಬಂದು ಸೇರುತಿದ್ದರು ಮತ್ತು ಈಗಲೂ ಸೇರುತ್ತಾರೆ.ರಾಜಕಾರಣಿಗಳ ಸಭೆಗೆ ಕರೆತರುವ ಹಾಗೆ ಹಳ್ಳಿ ಹಳ್ಳಿಗೆ ಲಾರಿ ಕಳಿಸುವುದಿಲ್ಲ.ಅಥವಾ ದುಡ್ಡು ಕೊಡುವುದಿಲ್ಲ ಅದರೂ ಇವರನ್ನೆಲ್ಲಾ ಒಂದು ಗೂಡಿಸುವ ಕೊಟ್ಟೂರೇಶ್ವರನ ಶಕ್ತಿ ಬಗ್ಗೆ ನನಗೆ ವಿಚಿತ್ರ ಆಸಕ್ತಿ.
ನೂರಾರು ವರ್ಷಗಳಿಂದ ನಮ್ಮೂರ ಸುತ್ತಮುತ್ತಲಿನ ಲಕ್ಷಾಂತರ ಜನರ ಬದುಕಿನ ಕಷ್ಟ ಸುಖದಲ್ಲಿ ಕೊಟ್ಟೂರೇಶ್ವರ ಭಾಗಿಯಾಗಿದ್ದಾನೆ.ತಮ್ಮೆಲ್ಲ ನೋವು-ನಲಿವುಗಳನ್ನು ಈ ಜನರು ಕೊಟ್ಟೂರೇಶ್ವರನೊಂದಿಗೆ ಹಂಚಿಕೊಂಡಿದ್ದಾರೆ.ಕೊಟ್ಟೂರೇಶ್ವರ ಮಾತ್ರವಲ್ಲ,ಈ ರೀತಿಯಲ್ಲಿ ಕರ್ನಾಟಕದ ಉದ್ದಕ್ಕೂ ನೂರಾರು ದೈವಗಳಿವೆ.ಕೊಟ್ಯಂತರ ಜನರು ತಾವು ನಂಬಿದ ಜನರೊಂದಿಗೆ ಇಂತಹುದೇ ಸಂಬಂಧ ಹೊಂದಿದ್ದಾರೆ.ನಾಯಕನಹಟ್ಟಿ ತಿಪ್ಪೇಸ್ವಾಮಿ,ಮೈಲಾರ ಲಿಂಗಪ್ಪ,ಕೂಲಹಳ್ಳಿ ಗೋಣಿ ಬಸವ,ಸವದತ್ತಿ ಎಲ್ಲಮ್ಮ,ಗುಲ್ಬರ್ಗದ ಶರಣ ಬಸಪ್ಪಅಪ್ಪ,ಗದುಗಿನ ತೊಂಟದರ್ಯ,ದಕ್ಷಿಣ ಕರ್ನಾಟಕದಲ್ಲಿ ಮಲೆಮಹದೇಶ್ವರ,ಚಿಕ್ಕಲೂರಿನ ಮಂಟೇಸ್ವಾಮಿ,ಮುಂತಾದ ಜಾತ್ರೆಗಳೇ ಇದಕ್ಕೆ ಸಾಕ್ಷಿ.ಕರ್ನಾಟಕದ ಚರಿತ್ರೆ ಎಂದು ನಾವು ಓದುವ ಪುಸ್ತಕಗಳಲ್ಲಿ ಈ ದೈವಗಳ ಬಗ್ಗೆ ಉಲ್ಲೇಖವೇ ಇಲ್ಲ (ನಮ್ಮ ಚರಿತ್ರೆ ಪುಸ್ತಕಗಳು ಒಳಗೊಂಡಿರುವ ವಿಷಯ ಕುರಿತು ಮತ್ತೆ ಬರೆಯುವೆ.)
ಆರಂಭದಲ್ಲಿ ಹುಚ್ಚನ ಹಾಗೆ ಗತಿ ಇಲ್ಲದವನ ರೀತಿಯಲ್ಲಿ ಎಂಟ್ರಿಯಾಗಿದ್ದ ಕೊಟ್ಟೂರೇಶ್ವರ (ಈಗಲೂ ಜನ ಹುಚ್ಚ ಕೊಟ್ರಯ್ಯ ಅಂಥ ಕರೆಯುವುದು ರೂಢಿಯಲ್ಲಿದೆ)ಈಗ ಪಡೆದುಕೊಂಡ ರೂಪಾಂತರ ಮಾತ್ರ ವಿಶಿಷ್ಟವಾದುದು.ಕೊಟ್ಟೂರೇಶ್ವರನಿಗೆ ಈಗ ಬೆಳ್ಳಿ ರಥ ಇದೆ.ಬಂಗಾರದ ಒಡವೆಗಳಿವೆ.ವಜ್ರ ಕೂಡ ಇದೆ.ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ.ಇಂತಹ ವಿರುದ್ದಾತ್ಮಕ ಚಲನೆಗೆ ಕಾರಣ ಏನು? ಇದು ಅರ್ಥವಾದರೆ, ನನ್ನ ಸುತ್ತಲಿನ ಜನರ ಬದುಕು ಅರ್ಥವಾದಂತೆ ಸರಿ.
ಕೊಟ್ಟೂರು ಜಾತ್ರೆ ಬಂತೆಂದರೆ ವಿವಿಧ ಜಾತಿಯ ಜನರು ಒಂದೊಂದು ಕರ್ತವ್ಯ ನಿರ್ವಹಿಸುತ್ತಾರೆ. ಅಗಸರು ಮಡಿ ಬಟ್ಟೆ ಹಾಸುವ ಕೆಲಸ ಮಾಡಿದರೆ, ಮೆದಾರರು ತೇರಿನ ಮೇಲ್ಬಾಗದ ಜಲ್ಲಿ ಕಟ್ಟುವ ಕೆಲಸ ಮಾಡುತ್ತಾರೆ. ಹಾಗೆಯೆ ದಲಿತರು ರಥದ ಚಕ್ರಕ್ಕೆ ಎಣ್ಣೆ ಹಾಕುತ್ತಾರೆ.ಮೇಳದವರು ಉತ್ಸವದ ಮುಂದೆ ಮೇಳ ಮಾಡುತ್ತಾರೆ.ಜಂಗಮರು ಪೂಜೆ ಮಾಡುತ್ತಾರೆ.ಹೀಗೆ ಕುಲೇಳು ಹದಿನೆಂಟು ಜಾತಿಗಳು ಒಂದೊಂದು ಕಾರ್ಯ ಮಾಡುತ್ತವೆ. ಇದು ನೂರಾರು ವರ್ಷಗಳಿಂದಲೂ ಇದೆ.ಈ ಕರ್ತವ್ಯಗಳನ್ನೆಲ್ಲ ಕೊಟ್ಟೂರೇಶ್ವರ ನಿಯೋಜಿಸಿದ್ದು ಎನ್ನಲಾಗುತ್ತದೆ.ಹೀಗೆ ಎಲ್ಲ ಜಾತಿಗಳಿಗೂ ಕೊಟ್ಟೂರೇಶ್ವರ ವಿವಿಧ ಕೆಲಸ ಮಾಡಲು ಹೇಳಿದ್ದು ಏಕೆ? ಮತ್ತೊಂದು ಮುಖ್ಯ ವಿಷಯವೆಂದರೆ ಕೊಟ್ಟೂರೇಶ್ವರ ಕೊಟ್ಟೂರಿಗೆ ಬರುವಾಗ ದಲಿತರ ಮನೆಯಲ್ಲಿ ಊಟ ಮಾಡಿದ ಎಂದು ಜನಪದ ಕಾವ್ಯಗಳು ಉಲ್ಲೇಖಿಸುತ್ತವೆ.ಈಗಲೂ ರಥೋತ್ಸವದ ವೇಳೆ ದಲಿತರ ಮನೆಯಿಂದ ಪ್ರಸಾದ ಬಂದ ನಂತರವೇ ತೇರು ಹೊರಡುತ್ತದೆ.ವಿವಿಧ ವರ್ಗಗಳನ್ನು ಒಂದು ಗೂಡಿಸುವ ಪ್ರಯತ್ನದ ಭಾಗವಾಗಿ ಮಾತ್ರ ಇದನ್ನು ಗ್ರಹಿಸಬೇಕಿಲ್ಲ.ಇದಕ್ಕಿರುವ ಐತಿಹಾಸಿಕ ಕಾರಣಗಳೇನು? ಹಾಗು ಸದ್ಯಕ್ಕೆ ಆಗಿರುವ ಬದಲಾವಣೆಗಳು ಏನು ಎನ್ನವುದು ಮುಖ್ಯ.
ಕೊಟ್ಟೂರೇಶ್ವರನ ಕಾಲ ೧೬ನೆ ಶತಮಾನದ ಆರಂಭ (ಸುಮಾರು ೧೫೮೦).ವಿಜಯನಗರ ಸಾಮ್ರಾಜ್ಯ ಪತನವಾಗಿ (೧೫೬೫)ಎಲೆಲ್ಲೂ ಅರಾಜಕತೆ ಮನೆ ಮಾಡಿತ್ತು.ಯುದ್ಧಗಳು ದಿನನಿತ್ಯದ ಬದುಕಿನ ಭಾಗಗಳಗಿದ್ದವು.ಕೊಟ್ಟೂರು ಸುತ್ತಮುತ್ತಲಿನ ಹಲವಾರು ಪಾಳೆಗಾರರು ಅಧಿಕಾರಕ್ಕಾಗಿ ನಿರಂತರವಾಗಿ ಸಂಘರ್ಷ ಮಾಡುತ್ತಿದ್ದರು.ಕೊಟ್ಟೂರು ಸುತ್ತಮುತ್ತಲಿನ ಹರಪನಹಳ್ಳಿ,ಗುಡೆಕೋಟೆ, ಚಿತ್ರದುರ್ಗ, ಜರಿಮಲೆ, ನಾಯಕನಹಟ್ಟಿ ಸೇರಿದಂತೆ ಹಲವಾರು ಪಾಳೆಗಾರರು ಅಧಿಕಾರಕ್ಕಾಗಿ ಕಿತ್ತಾಟದಲ್ಲಿ ತೊಡಗಿದ್ದರು.ಹೀಗೆ ನಡೆಯುತ್ತಿದ್ದ ಕಲಹದಲ್ಲಿ ಸೋತವರ ಪ್ರಾಂತ್ಯಗಳನ್ನು ಕೊಳ್ಳೆ ಹೊಡೆಯುತ್ತಿದ್ದರು.ಇವರ ಸಂಘರ್ಷಕ್ಕೂ ನಮ್ಮೂರ ಜಾತ್ರೆಗೂ ಎಲ್ಲಿಲ್ಲದ ಸಂಬಂಧ.
ಕೊಟ್ಟೂರೇಶ್ವರ ತಾನು ಬದುಕಿರುವಾಗಲೇ ಜಾತ್ರೆಗೆ ಕಡ್ಡಾಯವಾಗಿ ಬಂದು ಇಂತಿಂಥ ಕಾರ್ಯ ನಿರ್ವಹಿಸಬೇಕೆಂದು ವಿವಿಧ ವರ್ಗಗಳಿಗೆ ಸೂಚನೆ ನೀಡುತ್ತಾನೆ.ತನ್ನ ರಥೋತ್ಸವಕ್ಕೆ ತಾನೆ ಲಕ್ಷಾಂತರ ಜನ ಸೇರಿಸಲು ಬಯಸುತ್ತಾನೆ.ಹೀಗೆಂದು ಕೊಟ್ಟೂರೇಶ್ವರನ ಬಗ್ಗೆ ಇರುವ ಕಥೆಗಳು, ಹಾಡುಗಳು ಹೇಳುತ್ತವೆ. ಆಸೆ-ಆಕಾಂಕ್ಷೆ ತ್ಯಜಿಸಿದ ವಿರಾಗಿಯೊಬ್ಬ ಜಾತ್ರೆಯ ವೈಭವ ಯಾಕೆ ಬಯಸುತ್ತಾನೆ ಅನ್ನುವುದು ಮುಖ್ಯ.ನಮ್ಮ ಸುತ್ತಲಿನ ನೂರಾರು ದೈವಗಳ ಕುರಿತು ಈ ರೀತಿಯ ಕಥೆಗಳಿವೆ.
ಕೊಟ್ಟೂರೇಶ್ವರ ತಾನು ಬದುಕಿರುವಾಗಲೇ ಜಾತ್ರೆಗೆ ಕಡ್ಡಾಯವಾಗಿ ಬಂದು ಇಂತಿಂಥ ಕಾರ್ಯ ನಿರ್ವಹಿಸಬೇಕೆಂದು ವಿವಿಧ ವರ್ಗಗಳಿಗೆ ಸೂಚನೆ ನೀಡುತ್ತಾನೆ.ತನ್ನ ರಥೋತ್ಸವಕ್ಕೆ ತಾನೆ ಲಕ್ಷಾಂತರ ಜನ ಸೇರಿಸಲು ಬಯಸುತ್ತಾನೆ.ಹೀಗೆಂದು ಕೊಟ್ಟೂರೇಶ್ವರನ ಬಗ್ಗೆ ಇರುವ ಕಥೆಗಳು, ಹಾಡುಗಳು ಹೇಳುತ್ತವೆ. ಆಸೆ-ಆಕಾಂಕ್ಷೆ ತ್ಯಜಿಸಿದ ವಿರಾಗಿಯೊಬ್ಬ ಜಾತ್ರೆಯ ವೈಭವ ಯಾಕೆ ಬಯಸುತ್ತಾನೆ ಅನ್ನುವುದು ಮುಖ್ಯ.ನಮ್ಮ ಸುತ್ತಲಿನ ನೂರಾರು ದೈವಗಳ ಕುರಿತು ಈ ರೀತಿಯ ಕಥೆಗಳಿವೆ.
ಜಾತ್ರೆಗಳು ತನ್ನ ಬೆಂಬಲಿಗರ ಶಕ್ತಿಯ ಪ್ರದರ್ಶನ ಮಾಡಲು ಸಂತನಿಗೆ ಉತ್ತಮ ವೇದಿಕೆಯಾಗಿತ್ತು.ಈ ಮೂಲಕ ರಾಜಕೀಯ ಕಚ್ಚಾಟದಲ್ಲಿ ನಿರತವಾಗಿದ್ದ ಪಾಳೆಗಾರರಿಗೆ ಸಂತ ತನ್ನದೇ ಅದ ಸಂದೇಶ ಕಳಿಸುತ್ತಿದ್ದನು.ನಿಮ್ಮ ಕಿತ್ತಾಟಗಳು, ದ್ವೇಷಗಳು ನನ್ನ ಅಸ್ತಿತ್ವಕ್ಕೆ ಧಕ್ಕೆ ತರದಿರಲಿ.ಇದಕ್ಕೆ ವಿರುದ್ದವಾಗಿ ನೀವು ದೇವಾಲಯ ಇಲ್ಲವೇ ದೇವಾಲಯದ ಸಂಪತ್ತಿನ ಮೇಲೆ ಅಧಿಕಾರ ಸ್ಥಾಪಿಸಲು ಯತ್ನಿಸಿದರೆ ನನ್ನ ಲಕ್ಷಾಂತರ ಭಕ್ತರ ಅಕ್ರೋಶ ಎದುರಿಸಬೇಕಾಗುತ್ತದೆ ಎಂದು ಸಂತ ರಾಜಕೀಯ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಸುತ್ತಿದ್ದ. ಮತ್ತು ಈ ಸಂತನ ಪ್ರೀತಿಗೆ ಪಾತ್ರರಾಗುವುದೆಂದರೆ ಆತನ ಭಕ್ತರ ಒಲುಮೆ ಪಡೆದಂತೆ ಎನ್ನುವುದು ರಾಜಕೀಯ ನಾಯಕರಿಗೂ ಬಹುಬೇಗನೆ ಅರ್ಥವಾಗುತ್ತಿತ್ತು. ಹಾಗಾಗಿ ತಮ್ಮ ನಡುವಿನ ದ್ವೇಷಗಳ ನಡುವೆಯೇ ಈ ಧಾರ್ಮಿಕ ನಾಯಕನಿಗೆ ಪಾಳೆಗಾರರು ಸಲಾಂ ಹೊಡೆಯುತ್ತಿದ್ದರು.ಚಿತ್ರದುರ್ಗ ಹಾಗು ಹರಪನಹಳ್ಳಿ ಪಾಳೆಗಾರರು ಪರಸ್ಪರ ವೈರಿಗಳು. ಆದರೆ, ಕೊಟ್ಟೂರೆಶ್ವರ ಮಠಕ್ಕೆ ಈ ಮನೆತನಗಳು ಭೂಮಿ ದಾನ ನೀಡಿವೆ. ಹೀಗೆ ದಾನ ನೀಡುವ ಮೂಲಕ ಕೊಟ್ಟೂರೇಶ್ವರನ ಲಕ್ಷಾಂತರ ಭಕ್ತರನ್ನು ಒಲಿಸಿಕೊಳ್ಳಲು ಯತ್ನಿಸಿವೆ.ಹಾಗಾಗಿ ಕರ್ನಾಟಕದ ನೂರಾರು ದೇವಾಲಯಗಳಿಗೆ ದಾನ ನೀಡುವುದನ್ನು ನಾವು ಬರಿಯ ಭಕ್ತಿಯ ಸಂಕೇತವಾಗಿ ಮಾತ್ರ ಗ್ರಹಿಸಬೇಕಿಲ್ಲ ಅದರಾಚೆಗೆ ಅದಕ್ಕೊಂದು ರಾಜಕೀಯ ಆಯಾಮ ಇರುತ್ತದೆ.ಹಾಗೆಯೆ ಜಾತ್ರೆ ಕೂಡ, ಧಾರ್ಮಿಕ ನಾಯಕನ ಶಕ್ತಿಯ ಪ್ರದರ್ಶನದ ಭಾಗವಗುವುದರ ಮೂಲಕ ರಾಜಕೀಯ ಆಯಾಮ ಪಡೆದುಕೊಂಡಿರುತ್ತದೆ.
ಧಾರ್ಮಿಕ ಮತ್ತು ರಾಜಕೀಯ ಶಕ್ತಿಗಳನ್ನು ಪೋಷಿಸುವ ಕೆಲಸ ಸಾಮಾನ್ಯ ಜನರ ಬದುಕಿನ ಭಾಗವಾಗಿತ್ತು.ದೇವಾಲಯಗಳಿಗೆ ನೀಡುತ್ತಿದ್ದ ಬಂಜರು ಭೂಮಿಯನ್ನು ಭಕ್ತರ ಮೂಲಕ ಕೃಷಿ ಭೂಮಿಯನ್ನಾಗಿ ಮಾಡಲಾಗುತ್ತಿತ್ತು.ಈ ಭೂಮಿಯ ಮೇಲೆ ಮತ್ತು ಅದರ ಉತ್ಪನ್ನದ ಮೇಲೆ ರಾಜರು ತೆರಿಗೆ ವಿಧಿಸುತ್ತಿದ್ದರು.ಆ ಮೂಲಕ ತಮ್ಮ ಆದಾಯ ಹೆಚ್ಚಾಗುವಂತೆ ಮಾಡಿಕೊಳ್ಳುತ್ತಿದ್ದರು.
ಹೀಗೆ ರಾಜಕೀಯ ನಾಯಕರು ಕೊಟ್ಟೂರೆಶ್ವರ ಭಕ್ತರನ್ನು ಒಲಿಸಿಕೊಳ್ಳಲು ಯತ್ನಿಸಿರುವುದು ಆಗಿನಿಂದಲೂ ನಡೆದುಕೊಂಡೇ ಬಂದಿದೆ.ಅದು ಈಗಲೂ ನಿಂತಿಲ್ಲ. ಚುನಾವಣೆ ಬಂತೆಂದರೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷಗಳು ನಮ್ಮೂರ ದೇವಸ್ಥಾನಕ್ಕೆ ಸಾಕಷ್ಟು ಹಣ ದಾನ ನೀಡುತ್ತವೆ. ಊರಿಗೆ ಪ್ರಚಾರಕ್ಕೆ ಬರುವ ಯಾವುದೇ ಪ್ರಮುಖ ಮುಖಂಡರು ದೇವಾಲಯದ ಮುಂದೆ ನಿಂತು ಲಕ್ಷಾಂತರ ರೂಪಾಯಿ ದಾನ ಮಾಡುತ್ತಾರೆ. ಬೀರ್ ಉದ್ಯಮಿ ವಿಜಯ್ ಮಲ್ಯ ಕನ್ನಡವನ್ನು ತೊದಲುತ್ತ ತನ್ನ ಪಕ್ಷದ ಪರವಾಗಿ ಲಕ್ಷ ರೂಪಾಯಿ ದಾನ ಘೋಷಣೆ ಮಾಡಿದ್ದೂ ನನಗಿನ್ನೂ ನೆನಪಿದೆ. ಇನ್ನೇನು ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ. ಈ ಬಾರಿ ಕೊಟ್ಟೂರು ಜಾತ್ರೆಗೆ ಬರುವ ಸುತ್ತಲಿನ ಭಕ್ತರನ್ನು ಒಲಿಸಿಕೊಳ್ಳಲು ವಿವಿಧ ಪಕ್ಷಗಳು ಮತ್ತೆ ಸರ್ಕಸ್ ಮಾಡಲಿವೆ.ನಮ್ಮೂರ ಜಾತ್ರೆಗೆ ಬಂದರೆ ಇವೆಲ್ಲಾ ನೀವು ನೋಡಬಹುದು. ತಪ್ಪದೆ ಬನ್ನಿ.. ಫೆಬ್ರವರಿ ೧೯, ಮರೀಬೇಡಿ.
hi sathish, jatre vivara chennagide... somu
ReplyDeleteನಿಜಕ್ಕೂ ಖುಶಿಯಾಗಿದೆ ಮಾರಾಯ!
ReplyDeleteನಿಮ್ಮಗಳ ಅಗಾಧ ಗ್ರಹಿಕೆಯ, ಅಮೋಘ ಮಾತಿನ, ನಿಚ್ಚಳ ಪ್ರೀತಿಯ ಜೊತೆ ಜೊತೆಗೆ ಬೆಳೆದವನು ನಾನು.
ಊರಿನಿ೦ದ ದೂರ ಇದ್ದೀರಿ ಅನ್ನುವುದು ಎಷ್ಟೋ ಬಾರಿ ಕಾಡಿದ ಕೊರ್‍ಅತೆ ! ಇ ಬ್ಲಾಗ್ ನೊ೦ದಿಗೆ ನಾನು ಕೊರತೆ ಕಳೆದುಕೊಳ್ಳುತ್ತೀನೆ೦ದರೆ ನಿಜಕ್ಕೂ ನೀನು ಬರೆದ ಕೊಟ್ಟೂರೇಶ ದೇವರೆ ಸರಿ. ! ಜಗದೀಶ ನೂ ಇ ಬ್ಲಾಗ್ ಲ್ಲಿ ಬರೆಯಲಿ.. ಈಗೊ೦ದು ಆಶಯ... ಹಾರೈಕೆ .
ha ha im shetty here .v nice preeti kathe .kushi aytu
ReplyDeleteThis comment has been removed by the author.
ReplyDeletehi,patil this is good
ReplyDelete...hi... nice blog ...nice story.
ReplyDeletehai..nimmibbarannu noduttiddare nijakku "jodihakki"ennuva maatu artapurna ansutte. blog tumba channagide.-arun joladakudligi
ReplyDelete