Thursday, 12 February, 2009

ಎಲ್ಲೋ... ಯಾವಾಗೋ... ಓದಿದ್ದು...

ಇನ್ನೇನು ನಾಳೆ ಪ್ರೇಮಿಗಳ ದಿನಾಚರಣೆ.. ಶ್ರೀರಾಮಸೇನೆ ಅಬ್ಬರ, ಪ್ರಗತಿಪರರ ಕೂಗಿನ ಮಧ್ಯ ಪ್ರೀತಿ ತನ್ನ ಅಭಿವ್ಯಕ್ತಿ ಮಾಡಿಕೊಳ್ಳುವ ಆತುರದಲ್ಲಿದೆ.. ಪ್ರೀತಿ ಅಂದರೇನು ? ಅಂತ ನಾನು ಯೋಚಿಸುತ್ತಲೇ ಇದ್ದೇನೆ.. ವಿಶಾಲ ಹೃದಯದವನಾದ ನಾನು, ನನ್ನ ಹೃದಯದಲ್ಲೂ ಸಾಕಷ್ಟು ಪ್ರೇಮಿಗಳ ಹೆಸರು ಬರೆದುಕೊಂಡಿದ್ದೇನೆ. ಇಂಥಪ್ಪ ನನ್ನನ್ನು ಪ್ರೀತಿ ಎಂದರೇನು ? ಎಂದು ಯಾರಾದರು ಕೇಳಿದರೆ ಈಗಲೂ ಹೇಳಲು ಕಷ್ಟ ಪಡುತ್ತೇನೆ. ಇಂಥಹ ಸಂದರ್ಭದಲ್ಲೆಲ್ಲಾ ನನ್ನ ನೆರವಿಗೆ ಬರುವುದು ಒಂದು ಕಥೆ ಮಾತ್ರ.. ಪ್ರೀತಿ ಎಂದರೇನು ಎಂದು ಕೇಳಿದರೆ ಈಗಲೂ ನಾನು ಈ ಕಥೆ ಹೇಳುತ್ತೇನೆ. ಈ ಕಥೆ ಎಲ್ಲಿ ಓದಿದೆ ಮತ್ತು ಯಾವಾಗ ಓದಿದೆ ಅನ್ನುವುದು ನೆನಪಾಗುತ್ತಿಲ್ಲ.. ಆದರೆ ಈ ಕಥೆ ನಾನು ಬರೆದದ್ದಂತು ಅಲ್ಲ.. ಇಷ್ಟು ಸ್ಪಷ್ಟನೆ ನಾನು ಕೊಡಬಲ್ಲೆ.. ನೀವು ಒಮ್ಮೆ ಈ ಕಥೆ ಕೇಳಿ..

ಅದೊಂದು ದೊಡ್ಡ ಮರ. ಆ ಮರದ ತುಂಬ ಹಕ್ಕಿಗಳು, ಹೂವುಗಳು, ಹಣ್ಣು-ಹಂಪಲಗಳು ಯಾವಾಗಲು ತುಂಬಿರುತ್ತಿದ್ದವು. ಆಕಾಶದೆತ್ತರಕ್ಕೆ ಬೆಳೆದ ಆ ಮರದ ನೆರಳಲ್ಲಿ ಪುಟ್ಟ ಮಗುವೊಂದು ಆಡಲು ಬರುತ್ತಿತ್ತು. ಆ ಮಗು ಮತ್ತು ಮರದ ನಡುವೆ ಪ್ರೀತಿ ಬೆಳೆದಿತ್ತು. ಮಗು ಆಡಲು ಬಂದರೆ ಮರಕ್ಕೆ ಎಲ್ಲಿಲ್ಲದ ಸಂತಸ. ಅಷ್ಟು ದೊಡ್ಡ ಮರ, ಮಗು ಬರುತ್ತಿದ್ದಂತೆ ಬಾಗಿ ಹಣ್ಣು, ಹೂವು ಎಲ್ಲವನ್ನು ಕೊಡುತ್ತಿತ್ತು.

ಪ್ರೀತಿ ಎಲ್ಲಿ ಇರುತ್ತದೋ ಅಲ್ಲಿ ಬಾಗುವಿಕೆ ಇರುತ್ತದೆ. ಎಲ್ಲಿ ನಾನು ಎನ್ನುವ ಇಗೋ (ಅಹಂಕಾರ) ಇರುತ್ತದೋ ಅಲ್ಲಿ ಇನ್ನೊಬ್ಬರ ಮುಂದೆ ಬಾಗಲು ಸಾಧ್ಯವಾಗುವುದಿಲ್ಲ.

ಆಡಲು ಬಂದ ಮಗು ಎಷ್ಟೋ ಬಾರಿ ಮರದ ಚಿಗುರು, ಮೊಗ್ಗುಗಳನ್ನೆಲ್ಲಾ ಕಿತ್ತುತಿತ್ತು. ಆದರೂ ಮರಕ್ಕೆ ಮಾತ್ರ ದುಃಖ ಆಗುತ್ತಿರಲಿಲ್ಲ. ಏಕೆಂದರೆ ಪ್ರೀತಿಗೆ ಏನನ್ನಾದರೂ ಕೊಡಬೇಕೆಂದರೆ ಎಲ್ಲಿಲ್ಲದ ಹಿಗ್ಗು. ಆದರೆ ಅಹಂಕಾರ ಇದಕ್ಕೆ ವಿರುದ್ದ..

ದಿನಗಳು ಕಳೆದವು. ಮಗು ಸ್ವಲ್ಪ ದೊಡ್ಡದಾಯಿತು. ಈಗ ಮಗು ಶಾಲೆಗೆ ಹೋಗಲಾರಂಭಿಸಿತು. ನಮ್ಮ-ನಿಮ್ಮ ಹಾಗೆ ಅದು ಎಲ್ಲರಿಗಿಂತ ಫರ್ಸ್ಟ್ ಬರಬೇಕು, ಓದಿ ಡಾಕ್ಟರ್, ಇಂಜಿನಿಯರ್ ಆಗಬೇಕು ಎನ್ನುವ ಆಸೆ ಪಟ್ಟಿತು. ಹೀಗಾಗಿ ಮರದ ಹತ್ತಿರ ಬರುವುದನ್ನು ಕಡಿಮೆ ಮಾಡಿತು. ಆದರೆ, ಮರ ಮಾತ್ರ ಮಗುವಿನ ಬರುವಿಕೆಗಾಗಿ ಕಾಯುತ್ತಿತ್ತು. ಮಗು ಒಮ್ಮೆ ಬಂದರೆ ಮತ್ತೆ ಬರಲು ಹಲವು ದಿನಗಳನ್ನೇ ತೆಗೆದುಕೊಳ್ಳುತ್ತಿತ್ತು. ಆದರೂ ಮರ ಮಾತ್ರ ಯಾವುದೇ ಬೇಸರವಿಲ್ಲದೆ ಮಗುವಿಗಾಗಿ ಕಾಯುತ್ತಿತ್ತು.

ಏಕೆಂದರೆ ಪ್ರೀತಿ ಕಾಯುತ್ತದೆ. ಕಾಯಿಸುವುದಿಲ್ಲ. ಕಾಯುವುದರಲ್ಲೇ ಅದು ಸಂತಸ ಪಡುತ್ತದೆ.

ಮಗು ಈಗ ಯುವಕನಾದ. ಎಲ್ಲರಿಗಿಂತ ಫರ್ಸ್ಟ್ ಬರಬೇಕು, ಎಲ್ಲರಿಗಿಂತ ಮೇಲೆ ಬರಬೇಕು ಎನ್ನುವ ಆಕಾಂಕ್ಷೆಗಳು ಇನ್ನಷ್ಟು ಹೆಚ್ಚಾದವು. ಈಗಂತೂ ಮರದ ಹತ್ತಿರ ಬರುವುದನ್ನೇ ಬಿಟ್ಟಿದ್ದ.. ಆತನಲ್ಲಿನ ಅಹಂಕಾರ ಜಾಸ್ತಿ ಆಗುತ್ತಲೇ ಹೋಯಿತು.

ಪ್ರೀತಿ ಎಲ್ಲರಲ್ಲೂ ಬೆರೆಯಲು ಬಯಸುತ್ತದೆ. ಅಹಂಕಾರ ಮಾತ್ರ ಯಾರೊಂದಿಗೂ ಬೆರೆಯುವುದಿಲ್ಲ. ಅದು ಎಲ್ಲರು ತನ್ನ ಬಳಿಯೇ ಬರಲಿ ಎಂದು ಬಯಸುತ್ತದೆ.

ಒಂದು ದಿನ ಆ ಯುವಕ ಮರದ ಮುಂದೆ ಹೋಗುತ್ತಿದ್ದ.. ಆದರೂ ಮರವನ್ನೇ ನೋಡಲಿಲ್ಲ.. ಏಕೆಂದರೆ ಆ ಮರದ ಬಳಿ ಈಗ ಆತನ ಕೆಲಸವೇ ಇರಲಿಲ್ಲ. ಮರವೇ ಯುವಕನನ್ನು ಮಾತನಾಡಿಸಿತು. "ಯಾಕೆ ಈಗೀಗ ನನ್ನ ಬಳಿ ಬರುತ್ತಿಲ್ಲ " ಎಂದು ಪ್ರಶ್ನೆ ಮಾಡಿತು. ಯುವಕ ಸಿಟ್ಟಿನಿಂದಲೇ ಉತ್ತರ ಕೊಟ್ಟ. "ನಿನ್ನ ಬಳಿ ಏನಿದೆ ಅಂತ ಬರಲಿ. ನನ್ನ ಕಷ್ಟಗಳನ್ನು ನೀನು ಪರಿಹರಿಸ ಬಲ್ಲೆ ಏನು ?" ಎಂದು ಪ್ರಶ್ನಿಸಿದ.. ಯುವಕನ ಮಾತಿಗೆ ಮರ ನಕ್ಕು ಬಿಟ್ಟಿತು. ನಿನಗೆ ಏನು ಬೇಕು ಕೇಳು.. ನನ್ನಲ್ಲಿರುವುದೆಲ್ಲ ನಿನಗೆ ಕೊಡುತ್ತೇನೆ. ಎಂದಿತು. ನಿನ್ನ ಕಷ್ಟ ಪರಿಹರಿಸಲು ನನ್ನಿಂದಾದ ಸಹಾಯ ಮಾಡುವೆ ಎಂದು ಹೇಳಿತು.

ಪ್ರೀತಿ ಮಾತ್ರ ತನ್ನಲ್ಲಿ ಇರುವುದೆಲ್ಲವನ್ನು ಕೊಡಬಲ್ಲದು. ಯಾರು ಪ್ರೇಮಿಗಾಗಿ ಎಲ್ಲವನ್ನೂ ಧಾರೆ ಎರೆಯ ಬಲ್ಲರೋ ಅವರು ಮಾತ್ರ ಪ್ರೀತಿ ಎಂದರೇನು ಅಂಥ ಅರ್ಥ ಮಾಡಿಕೊಳ್ಳಬಲ್ಲರು. ಯಾರು ಮತ್ತೊಬ್ಬರಿಂದ ಪಡೆಯಲು ಬಯಸುವರೋ ಅವರು ಪ್ರೇಮದ ಮೊದಲ ಅಕ್ಷರ ಕೂಡ ಅರಿಯಲಾರರು.

ಇಂತಹದೊಂದು ಅವಕಾಶಕ್ಕಾಗಿ ಕಾಯುತ್ತಿದ್ದ ಯುವಕ ತನ್ನ ಕಷ್ಟಗಳನ್ನು ಹೇಳಿಕೊಳ್ಳಲು ಆರಂಭಿಸಿದ. "ನಾನು ನಿನ್ನ ಬಳಿ ಬರಬೇಕೆಂದರೆ ನನಗೆ ಹಣ ಬೇಕು. ಅದನ್ನು ನೀನು ಹೊಂದಿಸು" ಎಂದು ಕೇಳಿದ ಯವಕನ ಮಾತು ಕೇಳಿದ ಮರ ನಗಲಾರಂಭಿಸಿತು. ತಕ್ಷಣವೇ ಅದು ಆ ಯುವಕನಿಗೆ ಒಂದು ಮಾತು ಹೇಳಿತು. "ನೋಡು ನೀನು ಈ ಕೂಡಲೇ ನನ್ನ ಕೊಂಬೆಗಳಲ್ಲಿ ಇರುವ ಹಣ್ಣುಗಳನ್ನೆಲ್ಲ ಕಿತ್ತು ಪೇಟೆಯಲ್ಲಿ ಮಾರಿ ಹಣ ತೆಗೆದುಕೋ ಎಂದು ಹೇಳಿತು" ಕೂಡಲೇ ಆ ಯುವಕ ಬೇರೊಂದು ಯೋಚಿಸದೆ ಮರದ ಹಣ್ಣುಗಳನ್ನೆಲ್ಲ ಕಿತ್ತು ತೆಗೆದುಕೊಂಡು ಸಂತಸದಿಂದ ಹೋದ.. ಮರಕ್ಕೆ ಒಂದು ಥ್ಯಾಂಕ್ಸ್ ಕೂಡ ಹೇಳಲಿಲ್ಲ. ಮರ ಕೂಡ ಥ್ಯಾಂಕ್ಸ್ ಬಯಸಲಿಲ್ಲ.

ಪ್ರೀತಿ ತನ್ನಲ್ಲಿರುವುದನ್ನು ಕೊಡಲು ಸಂತಸ ಪಡುತ್ತದೆ. ಪ್ರೇಮಿಯ ದುಃಖವೆ ತನ್ನ ದುಃಖ ಎಂದು ಭಾವಿಸುತ್ತದೆ. ತನ್ನಲ್ಲಿ ಇರುವುದನ್ನು ಪ್ರೇಮಿಗೆ ಕೊಟ್ಟಾಗಲೇ ಪ್ರೀತಿಗೆ ಸಂತಸ. ಮತ್ತು ಯಾವುದೇ ಪ್ರತಿಫಲಾಪೆಕ್ಷೆಯನ್ನು ಪ್ರೀತಿ ಬಯಸುವುದಿಲ್ಲ.

ಹಣ ಪಡೆದು ಹೋದ ಯುವಕ ಮತ್ತೆ ಬಹುದಿನಗಳ ತನಕ ಇತ್ತ ಕಡೆ ಸುಳಿಯಲಿಲ್ಲ. ಆತ ಮರವನ್ನೇ ಮರೆತು ಬಿಟ್ಟಿದ್ದ. ಯುವಕನಿಗೆ ದುಡ್ದು ಗಳಿಸುವುದೇ ಸಂತಸವಾಗಿತ್ತು. ಆದರೆ ಮರ ಮಾತ್ರ ಆತನ ಬರುವಿಕೆಗಾಗಿ ಕಾಯುತ್ತಿತ್ತು. ಮರ ಮಾತ್ರ ಆ ಯುವಕನನ್ನು ದಿನವೂ ನೆನಪು ಮಾಡಿಕೊಳ್ಳುತ್ತಿತ್ತು.

ಪ್ರೀತಿ ಇರುವಲ್ಲಿ ನೆನಪು ಇರುತ್ತದೆ. ಎಲ್ಲಿ ಪ್ರೀತಿ ಇರುವುದಿಲ್ಲವೋ ಅಲ್ಲಿ ಮರೆವು ಕೆಲಸ ಮಾಡುತ್ತದೆ. ಮರೆವು ಇರುವಲ್ಲಿ ಬಾಂದವ್ಯಕ್ಕೆ ಅರ್ಥವೇ ಇರುವುದಿಲ್ಲ.

ಹೀಗೆ ಅದೆಷ್ಟೋ ವರ್ಷಗಳು ಉರುಳಿದವು. ಈಗ ಆ ಯುವಕ ಯಜಮಾನನಾಗಿದ್ದ. ಅಕಸ್ಮಾತ್ತಾಗಿ ಆ ಯಜಮಾನ ಮತ್ತೆ ಆ ಮರದ ಹತ್ತಿರ ಬಂದ.. ಆಗಲೂ ಮರ ಆತನನ್ನು ನೋಡಿ ಮಾತನಾಡಿಸಿತು. ಕುಶಲ ಕೇಳಿತು. ಆ ಯಜಮಾನ ಮರದ ಮಾತಿಗೆ ನಕ್ಕು ಬಿಟ್ಟ. ಇಂಥಹ ಹುಡುಗಾಟಿಕೆ ಎಲ್ಲ ಬಿಟ್ಟುಬಿಡು ಅಂದು ಮರಕ್ಕೆ ಸಲಹೆ ಮಾಡಿದ. ಇವೆಲ್ಲ ಕೆಲಸಕ್ಕೆ ಬಾರದ ಮಾತುಗಳು ಎಂದು ಹೇಳಿದ.

ಯಾರಲ್ಲಿ ಪ್ರೀತಿ ಇರುವುದಿಲ್ಲವೋ ಅವರಿಗೆ ಮರದ ಮಾತುಗಳು ಹುಚ್ಚಾಟ ಎನಿಸಿಬಿಡುತ್ತದೆ. ಪ್ರೀತಿ ಇರುವಲ್ಲಿ ಇದು ಹುಡುಗಾಟಿಕೆ ಅಲ್ಲ ಎನ್ನುವ ಅರಿವು ಮೂಡುವುದು.

ಈಗ ಆ ಯಜಮಾನನಿಗೆ ಮನೆ ಕಟ್ಟುವ ಆಸೆ ಆಗಿತ್ತು.. ಅದಕ್ಕಾಗಿ ಆತ ಆ ಮರದ ಬಳಿ ಬಂದಿದ್ದ.. ಮರದೊಂದಿಗೆ ಮಾತನಾಡುತ್ತಲೇ ಆತ ತನ್ನ ಮನೆ ಕಟ್ಟುವ ಇಂಗಿತ ವ್ಯಕ್ತಪಡಿಸಿದ. ಮರಕ್ಕೆ ಅರ್ಥವಾಯಿತು. ಅದು ಕೂಡಲೇ ನೋಡು ನೀನು ನನ್ನ ರೆಂಬೆ-ಕೊಂಬೆಗಳನ್ನೆಲ್ಲ ಕಡಿದುಕೊಂಡು ಹೋಗಿ ಮನೆ ಕಟ್ಟಿಕೊಳ್ಳಬಹುದು ಎಂದು ಹೇಳಿತು. ತಕ್ಷಣವೇ ಮರದ ಕೊಂಬೆಗಳನ್ನೆಲ್ಲ ಆ ಯಜಮಾನ ಕಡಿದ. ಅದರೂ ಮರಕ್ಕೆ ಸಂತಸವೇ.

ಪ್ರೀತಿಗೆ ಪ್ರೇಮಿಯ ಸಂತಸವೇ ಹೆಚ್ಚು. ಅದು ತನ್ನ ದುಃಖದಲ್ಲೂ ಪ್ರೇಮಿಯ ಸಂತಸ ಬಯಸುತ್ತದೆ. ತನ್ನ ಅಳುವಿನಲ್ಲೂ ಪ್ರೇಮಿಯ ನಗು ಬಯಸುತ್ತದೆ.

ಈಗ ಆ ಮರ ಬರಿದಾಯಿತು. ಮರದ ಬಳಿ ಈಗ ಮೊದಲಿನ ಹಾಗೆ ಹಕ್ಕಿಗಳು ಬರುತ್ತಿಲ್ಲ. ಗಾಳಿ ಬೀಸುತ್ತಿಲ್ಲ. ಬರಿದೆ ಬೊಡ್ಡೆ ಮಾತ್ರ ಉಳಿದಿತ್ತು. ಅದಕ್ಕೀಗ ನೆನಪು ಮಾತ್ರ ಸಂಗಾತಿಯಾಗಿತ್ತು. ಒಂದು ಎಲೆ ಕೂಡ ಅದರಲ್ಲಿ ಬೆಳೆಯದ ಸ್ಥಿತಿ ಏರ್ಪಟ್ಟಿತ್ತು.

ಮತ್ತೆ ಅದೆಷ್ಟೋ ವರ್ಷಗಳು ಉರುಳಿದವು. ಈಗ ಆ ಯಜಮಾನ ಮುದುಕನಗಿದ್ದ. ಬದುಕು ಆತನಿಗೆ ಸಾಕೆನಿಸಿತ್ತು. ಎಲ್ಲಾದರೂ ದೂರ ಹೋಗಿ ಬದುಕಬೇಕು ಎನಿಸಿತ್ತು. ಮರದ ಬಳಿ ಬಂದು ನಡುಗುತ್ತಲೇ ಕೇಳಿದ.. "ನೋಡು ನಾನು ಮನಶ್ಯಾಂತಿ ಪಡೆಯಲು ದೂರದ ದೇಶಕ್ಕೆ ಹೋಗಬೇಕು. ಈ ನದಿ ದಾಟಿ ಎಲ್ಲಾದರೂ ಹೋಗಿ ಬದುಕಬೇಕು ನನಗೆ ಏನಾದರು ಸಹಾಯ ಮಾಡು" ಎಂದ.. ಅದಕ್ಕೆ ಮರ ಹೇಳಿತು, "ನನ್ನಲ್ಲಿ ಉಳಿದಿರುವುದು ಈ ಕಾಂಡ ಭಾಗ ಮಾತ್ರ.. ಇದನ್ನೇ ಕಡಿದು ನೀನು ದೋಣಿ ಮಾಡಿಕೊಂಡು ಹೋದರೆ ನನ್ನ ಜನ್ಮ ಸಾರ್ಥಕವಾಗುತ್ತದೆ" ಎಂದು ಪ್ರತಿಕ್ರಿಯಿಸಿತು. ಕೂಡಲೇ ಮರದ ಬೇರು ಸಮೇತ ಕಿತ್ತ ಮುದುಕ ದೋಣಿ ಮಾಡಿಕೊಂಡು ಹೋಗಿಬಿಟ್ಟ. ಒಂದಾನೊಂದು ಕಾಲದಲ್ಲಿ ದೊಡ್ಡ ಮರವಿದ್ದ ಸ್ಥಳದಲ್ಲಿ ಈಗ ಏನು ಕಾಣುತ್ತಿಲ್ಲ. ಬೇರು ಸಮೇತ ಕಿತ್ತು ಹೋದ ಮರದ ಅಲ್ಪ-ಸ್ವಲ್ಪ ತುಂಡುಗಳು ಮಾತ್ರ ಅದಕ್ಕೆ ಸಾಕ್ಷಿ ಆಗಿದ್ದವು.

ಪ್ರೀತಿ ತನ್ನ ಸಾವಿನಲ್ಲೂ ಪ್ರೇಮಿಯ ಬದುಕಿನ ಬಗ್ಗೆ ಕಾಳಜಿ ವಹಿಸುತ್ತದೆ. ಪ್ರೇಮಿಗೆ ನೆರವಾಗುವುದಕ್ಕಿಂತ ಹೆಚ್ಚಿನ ಭಾಗ್ಯ ಇನ್ನೇನಿದೆ ಎಂದು ಪ್ರೀತಿ ಭಾವಿಸುತ್ತದೆ. ಯಾರಿಗೆ ಇಂಥ ಪ್ರೀತಿ ಅರ್ಥವಾಗುವುದಿಲ್ಲವೋ ಅವರಿಗೆ ಜಗತ್ತಿನ ಬಗ್ಗೆ ನಂಬಿಕೆಯೇ ಹುಟ್ಟುವುದಿಲ್ಲ.. ಅಂತವರು ಬರಿದೆ ವಂಚನೆಯಲ್ಲಿ ತೊಡಗುತ್ತಾರೆ.

ಕಥೆ ಇಲ್ಲಿಗೆ ಮುಗಿಯಲಿಲ್ಲ.

ನಾನೊಮ್ಮೆ ಆ ಮರದ ಅವಶೇಷಗಳ ಬಳಿಗೆ ಅಡ್ಡಾಡುತ್ತ ಹೋಗಿದ್ದೆ. ಆ ಮರದ ಚಿಕ್ಕ ತುಂಡು ನನ್ನನ್ನು ಮಾತಾದಿಸಿತು. ಇನ್ನೆಂದು ಹಸಿರಾಗಲು ಸಾಧ್ಯವಾಗದೆ ಜೀವ ಬಿಡುತ್ತಿರುವ ಆ ತುಂಡು ನನಿಗೆ ದೈನ್ಯದಿಂದ ಕೇಳಿತು. "ನೋಡಿ ನನ್ನ ಜೀವ ಹೋಗುತ್ತಿದೆ. ನನ್ನ ಕೊನೆಯ ಆಸೆ ಎಂದರೆ ನನ್ನ ಪ್ರೇಮಿ ನದಿಯಲ್ಲಿ ಪ್ರಯಾಣ ಹೋಗಿದ್ದಾನೆ. ಆತ ಸುರಕ್ಷಿತವಾಗಿ ತಲುಪಿದ ಬಗ್ಗೆ ನನಗೆ ಆತಂಕವಾಗಿದೆ. ಆತನು ಸುರಕ್ಷಿತವಾಗಿ ಇರುವ ಬಗ್ಗೆ ನನಗೆ ಮಾಹಿತಿ ನೀಡಲು ಸಾದ್ಯವೇ ?." ಎಂದು ಪ್ರಶ್ನಿಸಿತು.

ಪ್ರೀತಿಗೆ ಒಳಗಾದವನ ಪ್ರತಿ ಕಣದಲ್ಲೂ ಅದು ಪ್ರಜ್ವಲಿಸುತ್ತದೆ. ಪ್ರೀತಿಗೆ ಕೊಡುವುದಷ್ಟೇ ಗೊತ್ತು. ಬೇಡುವುದು ಗೊತ್ತಿಲ್ಲ.

ಪ್ರೀತಿ ಎಂದರೇನು ಎಂದು ಯಾರಾದರು ಕೇಳಿದರೆ ನಾನು ಈ ಕಥೆ ಹೇಳುತ್ತೇನೆ... ಪ್ರೀತಿ ಎಂದರೆ ಕಾಯುವುದಾ ? ಎಲ್ಲವನ್ನು ಕೊಡುವುದಾ ? ತನ್ನ ಅಳುವಿನಲ್ಲೂ ಪ್ರೇಮಿಯ ನಗು ಬಯಸುವುದಾ ? ಸಾಯುವ ಕೊನೆ ಕ್ಷಣದಲ್ಲೂ ಪ್ರೇಮಿಯ ಬದುಕಿನ ಬಗ್ಗೆ ಕಾಳಜಿವಹಿಸುವುದಾ ? ಗೊತ್ತಿಲ್ಲ ನಾನು ಈ ಕಥೆ ಹೇಳುತ್ತೇನೆ.

No comments:

Post a Comment